Monday, 10 December 2012

ಮಾತು ಮೌನ ಮತ್ತೂ ನಿದ್ದೆ

ಭಾವನೆಯೆಲ್ಲ  ಮಾತಾಗಿ ...

ನಿನ್ನೆದುರು  ಬಿಚ್ಚಿಡ ಬೇಕಾದ ಹೊತ್ತು ...

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ಬದುಕಿನ ಬ್ಲಾಕ್ ಅಂಡ್  ವೈಟ್  ಚಿತ್ರಕ್ಕೆ.....

ಬಣ್ಣ ಹಾಕಿ ಇವೆಲ್ಲ ನಮ್ಮದೇ ಎನ್ನುವ  ಕ್ಷಣ...... 

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ಭೂತವನ್ನೆಲ್ಲಾ  ತಿಕ್ಕಿ ತೊಳೆದು ....

ಭಾವಿ ಬದುಕಿಗೆ ಭಾಷ್ಯ ಬರೆಯುವ  ಹೊತ್ತು ...

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ನಡೆದು ಹೋದ ಧಾವಂತದ ಅಪರಾದ ....

ನಮ್ಮದೇ  ಕೂಗಿ ಹೇಳಬೇಕಾದ ಹೊತ್ತು ....

ಮಾತು  ಮೌನದ ಮಡಿಲಲ್ಲಿ ....
                              ಬೆಚ್ಚಗೆ  ಮಲಗಿತ್ತು ......

ನಿನ್ನ ದನಿಯು ಕಿವಿಗೆ ಬಡಿದು ಎದೆಗೆ ....

ಏರಲಾರದೆ  ಅಲ್ಲೇ ಸುತ್ತಿ ಸುತ್ತಿ ನಿಂತ ಹೊತ್ತು ..

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

ಎದೆಯ ಮಾತು ಮರೆತು ಹೋಗಿ  ಹೇಳಲೇನು ..

ಉಳಿದಿದೆ  ಎಲ್ಲ ನಿನಗೆ ತಿಳಿದಿದೆ  ಎಂದು .....

ಮಾತು  ಮೌನದ ಮಡಿಲಲ್ಲಿ ....

                              ಬೆಚ್ಚಗೆ  ಮಲಗಿತ್ತು ......

Tuesday, 30 October 2012

ಮೊದಲ ಸಲಾ.............


ಅಬ್ಬಾ ಏನೂ  ಕುತೂಹಲ ......... ಇವತ್ತು ಏನೂ ಹೊಸದು ...

ಕಾಯುತ್ತಿದ್ದೆ ...  ಮನದೊಳಗೆ  ಮಂಡಿಗೆ ಮೆದ್ದು ........

ಯಾವಾಗ  ಕ್ಲಾಸ್ ಬಿಡುತ್ತೆ / ಮನೆ ಯಾವಾಗ ತಲುಪುತ್ತೇನೆ ......

ಅಂತೆಲ್ಲ ಯೋಚಿಸಿ .... ಹೇಳಿದ ಪಾಠ  ತಲೆಗೇ ಹೋಗದೆ  .... 

ಒಟ್ಟಿನಲ್ಲಿ  ಕೂತಿದ್ದೆ ..... ಕ್ಲಾಸ್ ರೂಂ ನಲ್ಲಿ ......

ಅಂತು ಬೆಲ್ ಆಯಿತು ....

ಕತೆ ಹೇಳುತ್ತಾ  ಹೆಜ್ಜೆ ಹಾಕುವ ಹಿಂದಿನ ಮನೆ  ಲಕ್ಷ್ಮಿ ಯನ್ನ ಬಿಟ್ಟು ಹೋಗಲು ...

ಮಾಡಿದ  ಪ್ಲಾನ್ ಎಲ್ಲ ನೀರಿನಲ್ಲಿ  ಹೋಮ ಮಾಡಿದಂತಾಗಿ .... ಅವಳ 

ಯಾವ ಮಾತಿಗೂ ಲಕ್ಷ್ಯ  ಕೊಡದೆ ....

ಸುಮ್ಮನೆ  ಬಿರುಸಾಗಿ  ಹೆಜ್ಜೆ ಇಡುತ್ತಿದ್ದ ನನ್ನ ನೋಡಿ ...." ಏನೇ ಇವತ್ತು 

ಓಡುತ್ತಿದ್ದಿಯ ? ಮನೆಗೆ  ಯಾರಾದರು ಬರುತ್ತಾರಾ ? " 

ಅಂತ ಕೇಳಿದ್ದಕ್ಕೆ ನಾಲಿಗೆಯ ತುದಿಯ ವರೆಗೆ ಬಂದ ಮಾತನ್ನ ತಡೆ ಹಿಡಿದು 

.... ಅವಳು ಪಾಲಿಗೆ ಬಂದರೆ ಅಂತ ಭಯವಾಗಿ ...  

"ಇಲ್ಲ  ಅಮ್ಮ ಬೇಗ ಬಾ ತೋಟಕ್ಕೆ  ಹೋಗಿ ಬರೋಣ  ಅಂತ ಹೇಳಿದ್ದಾರೆ "....
 ಅಂತ ಬೊಗಳೆ ಬಿಟ್ಟೆ   !
"ನನ್ನ ಅಮ್ಮ ಪೇಟೆಗೆ  ಹೋಗಿದ್ದಾರೆ .... ಬರುವ ವರೆಗೆ..... 
ನಿಮ್ಮ ಮನೆಲಿರು ಅಂತ ಹೇಳಿದ್ರು  ನಿನ್ನ  ಅಮ್ಮನಿಗೂ  ಹೇಳಿ ಹೋಗ್ತೀನಿ  

ಅಂದಿದ್ದಾರೆ..... 

ಹಾಗಿದ್ದರೆ  ನಾನು ನಿಮ್ಮ ಜೊತೆ  ತೋಟಕ್ಕೆ  ಬರಬಹುದು"  ಅಂದಾಗ   

ಬೇಡ ಅನ್ನ ಲಾಗದೆ ... 

ಬಾಡಿದ  ಮುಖ ಹೊತ್ತು  ದೇವರಿಗೆ  ಹರಕೆ  ಹಾಕಿಕೊಳ್ಳ  ತೊಡಗಿದೆ ..... 

ನಿನ್ನೆ ಯಿಂದ ಇವತ್ತಿಗೆ  ಅಂತ ಕಾದೆ ದೇವರೇ  ಅಮ್ಮ ಇವತ್ತು ಮಾಡದಿರಲಿ ....

ನಾಳೆಯ ವರೆಗೆ  ಕಾದೆನು .... ..... 
ಪ್ಲೀಸ್  ದೇವರೇ  ನಾಳೆ  ೨೧  ಗರಿಕೆ  ಹಾಕುತ್ತೀನಿ ..

ಅಂತೆಲ್ಲ  ಲಂಚ  ದ ಆಮಿಷ ವನ್ನ ದೇವರಿಗೆ ಒಡ್ದ ತೊಡಗಿದೆ.......

ಆತ ಯಾವುದೊ  ಎಮರ್ಜೆನ್ಸಿ  ಕೆಲಸಕ್ಕೆ ಲಂಚ ತಗೊತಿದ್ದನೋ  ಗೊತ್ತಿಲ್ಲ,

ಅಥವಾ  ನಾನು ತೋರಿಸಿದ ಆಮಿಷ ಕಡಿಮೆ ಇತ್ತ ?

ನಿದ್ದೆ  ಮಾಡಿ ಬಿಟ್ಟಿರ ಬೇಕು ಬೆಳಗ್ಗಿ ನಿಂದ ನಡೆದ  ಪೂಜೆಗೆ ಹೊಡೆದ  

ಜಾಗಟೆ  ಶಬ್ದಕ್ಕೆ....

ಊದಿನ ಕಡ್ಡಿಯ ಮತ್ತೆ  ಧೂಪದ ಮಿಶ್ರ  ಘಮಕ್ಕೆ  ತಲೆ ನೋವು ಬಂದಿರ ಬೇಕು .....    

ಗೊತ್ತಿಲ್ಲ .....

ಅಂತು ನನ್ನ ಮಾತು ಕೇಳಲಿಲ್ಲ ...

ಮನೆಯ ಬಾಗಿಲಿಗೆ ಬರುತ್ತಿದ್ದಂತೆ ತರಕಾರಿಯನ್ನ ಫ್ರೈ ಮಡಿದ ಘಮ ಕ್ಕೆ ... 

ಅಂತು ಇನ್ನು ಬೇಡಿಕೊಂಡು ಪ್ರಯೋಜನವಿಲ್ಲ.....

ಅಮ್ಮ ನಿಗಾದರು ಬುದ್ದಿ ಬೇಡವ ? ಇವತ್ತೇ ಯಾಕೆ ಮಾಡಬೇಕಿತ್ತು..  

ಅದೂ ಹಿಂದಿನ  ಮನೆಯ ಕಮಲೂಚಿಕ್ಕಿ  ಮಗಳು ಸ್ಕೂಲ್  ನಿಂದ ಇಲ್ಲೇ 

ಬಂದು ಇರುತ್ತಾಳೆ..

ಅಂದಾಗ ಬುದ್ದಿ ಬೇಡವ ಅಂದು ಕೊಂಡೆ ....

ಅಮ್ಮ ವಿಚಾರ ಮಾಡಿರ ಬೇಕು ಅವಾಗವಾಗ  ಇಬ್ಬರು ಸೇರಿ ಸ್ವೀಟ್ 

ಮಾಡಲು ಸಹಾಯ ಮಾಡಿ ಕೊಳ್ಳುತ್ತಾರೆ...

ಹೊಸದೇನೋ ತಿಂಡಿ ಮಾಡಿದರೂ ಅತ್ತ ಇತ್ತ ಓಡಾಡುತ್ತೆ.... 

ಡಿಸ್ಕೌಂಟ್ ಗೂ ಒಟ್ಟಿಗೆ  ಹೋಗಿ ಒಂದೇ ತರಹದ ಸೀರೆ ತರುತ್ತಾರೆ ....

ಇವತ್ತು ಅಡುಗೆ ಮಾಡಕ್ಕೆ ಯಾಕೋ ಮನಸ್ಸಿಲ್ಲ ಕಮಲೂ  ಅಂತ ಅಮ್ಮ ಹೇಳಿದರೆ ..

ಅನ್ನ ಕ್ಕೆ ಇಡು ಸಾಕು ಹುಳಿ, (ಸಾಂಬಾರು ) ಪಲ್ಯ , 

ಅಪ್ಪೆಹುಳಿ  ನಾನು ಮಾಡ್ತಿ ಸಾಕು 

ಮತ್ತೆ ಮಾಡಡ.... ಅನ್ನುವ ಭಾಂದವ್ಯ ...  

ಮೊನ್ನೆ ಕಮಲೂಚಿಕ್ಕಿ  ಮಾಡಿದ ಹಲಸಿನ ಹಣ್ಣಿನ ಕಡಬು ಅಂತು ನೆನಪಾದರೆ ..... ಆಹಾ ..
"ನೀನು ಹೇಗೆ ಮಾಡಿದ್ದೂ ಅಂತ ಕೇಳಿ ಕಲಿತುಕೋ " ಅಪ್ಪ ಆದೇಶ  

ಹೊರಡಿಸಿದ ಮೇಲಂತೂ ...

ಅಮ್ಮ ನಿಗೆ ಕಮಲೂಚಿಕ್ಕಿ  ಮೇಲೆ ಪ್ರೀತಿ ....

ತಯಾರಿ ನಡೆದಿತ್ತು ಪಾಕೆಟ್ ತೆಗೆದಿಟ್ಟು  ನಮ್ಮ ಕಾಯುತ್ತಿದ್ದರು ... 


ಸರಿ ನೀವಿಬ್ಬರು ಇರುತ್ತೀರಿ ಅಂತ ಎರಡು ಮಾಡುತ್ತೀನಿ ನನಗೆ ಬೇಡ 

ಎನ್ನುತ್ತಾ ...

ಪಾಕೆಟ್ ಮೇಲಿನ ವಿವರ ಓದುತ್ತ ..

ಬೆಳ್ಳಿ ಬಣ್ಣದ  ..... ಪ್ಯಾಕ್  ಕತ್ತರಿಸಿ ಮಸಾಲೆ ಹಾಕಿ ...

ಪಕ್ಕಕ್ಕಿಟ್ಟರು .... ಹಳದಿ ಬಣ್ಣದ ಪ್ಯಾಕ್  ಮೇಲೆ ಅವರು ಬರೆದದ್ದನ್ನ  

ಓದುತ್ತಿದ್ದರು ...

ನಮ್ಮ ಹತ್ತಿರ ಸಣ್ಣ ಪ್ಯಾಕ್  ಸಿಕ್ಕಿದ್ದೇ .... ಸುವಾಸನೆ ಯನ್ನ ಆಘ್ರಾಣಿಸಿ... 

ಕತ್ತರಿಸಿದ 

ಬಾಗದಲ್ಲಿ ನಿಧಾನ ನಾಲಿಗೆ  ತೂರಿ   ವಾವ್....

ನನ್ನ ಲಕ್ಷ್ಮಿ ಯ  ಮೊದಲ  ಮ್ಯಾಗಿ ..... 
Saturday, 21 July 2012

ಐದೂಕಾಲರ ಬಸ್ಸುಮೊನ್ನೆ ನನ್ನ ಫ್ರೆಂಡ್ ಮನೆಗೆ ಬಂದಿದ್ದಳು ...
ಊಟ ಮಾಡಿ ಕತೆ ಹೇಳಿ .... ಬಾಲ್ಯ-ಟೀನ್ ನೆನಪಿಸುತ್ತಾ 
ಟೀ ಕುಡಿಯುವಾಗ  "ಬಸ್  ಹೋಗುತ್ತೇನೆ ನಿಮ್ಮ ಊರಿಗೆ ಇಗ?"
ಕೇಳಿದ್ದಕ್ಕೆ ಏನು ಉತ್ತರಿಸ ಬೇಕೆಂದೇ ಗೊತ್ತಾಗದೆ .... 
ಪಿಳಿಪಿಳಿ  ಕಣ್ಣು ಬಿಟ್ಟು ನಮ್ಮನ್ನೇ ನೋಡುತ್ತಿದ್ದ   ಅವಳ ಮಗಳ ಮಾತಿಗೆಳೆದೆ .......
ಮನದಲ್ಲಿ ಬಸ್ ನದೇ ವಿಚಾರ ಒಂದೂವರೆ ವರ್ಷದಿಂದ ರಸ್ತೆ  ರಿಪೇರಿ ಕೆಲಸಕ್ಕೆ ..
ಅಂತ ಬಂದ್ ಆದ ಬಸ್ ಮತ್ತೆ ಬರಲೇ ಇಲ್ಲ........
ಅದರೊಂದಿಗಿನ ನೆನಪುಗಳು .... ಕಾಡುತ್ತಿವೆ ...
ಮತ್ತೆ ಅದೇ ಬಸ್ ನಲ್ಲಿ ಹೋಗಬೇಕು .... 
ಪರಿಚಯದ ಮುಖಗಳು? ಸಿಗಬಹುದಾ?
ಯಾಕೋ ತುಂಬಾನೇ ಮಿಸ್ ಮಾಡುತ್ತಿದ್ದೀನಿ ...
ಅವತ್ತು ಕಾಲೇಜು ದಿನಗಳಲ್ಲಿ ಪ್ರತಿದಿನ  ಸಂಜೆ ಮನೆ ಸೇರುವ 
ಏಕಮೇವ   ಮಾರ್ಘ ಅಂದರೆ (ಬಸ್ ನಂ1094), ಐದೂಕಾಲರ ಬಸ್ಸೂ.......
ಸೋಮವಾರ ದಿಂದ ಶನಿವಾರದವರೆಗೆ ತಪ್ಪದೆ ಬರುತ್ತಿತ್ತು .....(!)
ಸ್ಕೂಲ್ ಮತ್ತೆ ಕಾಲೇಜ್ ನವರಿಗಾಗಿಯೇ ಬರುತ್ತೇನೋ .. 
ಎನ್ನುವ ಮಟ್ಟಿಗೆ ನಮ್ಮಿಂದಲೇ ತುಂಬಿ ಹೋಗುತ್ತಿತ್ತು .... 
ಮೊಬೈಲ್ ಫೋನ್ ಇಲ್ಲದ ದಿನಗಳು, ಬಸ್ನಲ್ಲೇ ಸುದ್ದಿ ಸಂಚಾರ , 
ಎಲ್ಲ ಕಿಟಕಿ ಸೀಟುಗಳಿಗೆ ಕಾಲೇಜ್  ಗುಟ್ಟುಗಳು ಗೊತ್ತಾಗುತ್ತಿತ್ತು........
"ಕೊನೆಯ ಸ್ಟಾಪ್ ಹುಡುಗಿ ಬಂದಳ... ಹಾಗಿದ್ದರೆ ಹೊರಡೋಣ ... ಅನ್ನುವ ಚಾಲಕ- ನಿರ್ವಾಹಕರು
ಎಲ್ಲರು ಪರಿಚಿತರು.... ಯಾಕಂದರೆ ನಮ್ಮದು ಪುಟ್ಟ ಹಳ್ಳಿ ಬರುವದು ಎರಡೇ ಬಸ್ ..... ಬೆಳಿಗ್ಗೆ ೮.೪೦ ಕ್ಕೆ 
ಸಂಜೆ ಐದೂಕಾಲ ಕ್ಕೆ ........
ಅವತ್ತೊಂದು ಶನಿವಾರ, ಕ್ಲಾಸ್ ಮುಗಿಸಿ ಬಸ್ ಸ್ಟ್ಯಾಂಡ್ ಗೆ ೪.೪೫ ಕ್ಕೆ ಬಂದು ಕುಳಿತಿದ್ದೆವು.
ಸ್ನೇಹಿತರೆಲ್ಲ ಹಾಸ್ಟೆಲ್ -ರೂಮ್ ಮಾಡಿಕೊಂಡು ಉಳಿದು ಕೊಂಡವರು,ಮಾತಾಡುತ್ತ ನಿಂತಿದ್ವಿ ,
ಐದೂಕಾಲರ ಬಸ್ ೬.೩೦ ಆದರು ಪತ್ತೆಯಿಲ್ಲ ಒಬ್ಬೊಬ್ಬರ ಬಸ್ ಬಂದಂತೆ ಹೊರಡುತ್ತಿದ್ದರು .....
ಹಸಿವು ಜಾಸ್ತಿಯಾಗುತ್ತಿತ್ತು... ಬೆಳಿಗ್ಗೆ ತಿಂದ ದೋಸೆ .... ತನ್ನ ಡ್ಯೂಟಿ ಮುಗಿಸಿತ್ತು ....
ಕಂಟ್ರೋಲರ್ ಕೇಳಿದ್ದಕ್ಕೆ "ಈಗ ಬರುತ್ತಮ್ಮ ಸ್ವಲ್ಪ ತಡ ".......
ಗಂಟೆ  ೭ ದಾಟುತ್ತಿತ್ತು...........
ಜೊತೆಗಿದ್ದವರೆಲ್ಲ  ಖಾಲಿಯಾಗುತ್ತಿದ್ದರು ........
ನಮಗೋ  ಅದೇ ಬಸ್ ಬರಬೇಕು ........
ಹೊರಗೆ ಆರದ   "ಆರಿದ್ರೆ" (ನಕ್ಷತ್ರ)  ಮಳೆ....
ಬೇರೆ ಬಸ್ ಅಂದರೆ ೪-೫ ಕಿ ಮಿ  ನಡೆದು ಹೋಗಬೇಕು ......
ನಾವು ಮೂವರು ಅಲ್ಲಿಯ ಕಲ್ಲು ಬೆಂಚಿನ ಮೇಲೆ ...
' ಗಾಂಧೀಜಿ ಯ ಕೋತಿಗಳಂತೆ '....... ಕುಳಿತಿದ್ದೆವು ಜನರೆಲ್ಲಾ .... 
ಖಾಲಿ ಯಾಗುತ್ತಿದ್ದರು ..........
ಬ್ಯಾಗ್ ನಲ್ಲಿಯ ಒಂದು ರೂಪಾಯಿಯ ಕಾಇನ್ ನಿಂದ ಮನೆಗೆ ಫೋನ್ ಮಾಡಲು.. ಪ್ರಯತ್ನಿಸಿದಾಗೆಲ್ಲ...
ಅಮ್ಮ ಹಲೋ ಎನ್ನುವದು ನನಗೆ ಕೇಳುತ್ತಿತ್ತು .... 
ನಾನು ಮಾತಾಡಿದ್ದು ಅವರಿಗೆ ಕೇಳುತ್ತಿರಲಿಲ್ಲ ......
ವಾಚು ಮಾತ್ರ ಸಮಯವನ್ನ  ಮುಂದೊಡಿಸುತ್ತಲೇ  ಇತ್ತು....

ಒಂದು ಕಡೆ ಭಯ , ಊರಿಗೆ ಹೋಗುವದು ಹೇಗೆ ?
ಇಲ್ಲಿ ಫ್ರೆಂಡ್ಸ್ ಎಲ್ಲ ವೀಕ್ಎಂಡ್  ಊರಿಗೆ ಹೋಗಿದ್ದಾರೆ ...........!
ಆಟೋ ದವರು ಬರಲ್ಲ ನಮ್ಮೂರಿಗೆ ಅದೂ....... ಇ ಹೊತ್ತಿನಲ್ಲಿ .......
ಅಳುವದಸ್ಟೇ ಬಾಕಿ .....

ಅದೆಲ್ಲಿಂದಲೋ ಪ್ರತ್ಯಕ್ಷ ನಾದ.... ಅವತ್ತಿನ ಪಾಳಿಯ ಡ್ರೈವರ್ .....
ಹೋಗುತ್ತಿದ್ದ ಜೀವ  ಬಂದಂತಾದರೂ..........
ಮುಂದಿನ ಟ್ರಿಪ್ ಸಮಯವೂ ಮುಗಿಯುತ್ತಿದೆ ........
 ಹಾಳಾದ ಬಸ್ ನ್ನ ಸರಿ ಮಾಡಿಸಿ ಕೊಂಡು ಬರಲು ತಡವಾದದ್ದಕ್ಕೆ ,
ಕಂಟ್ರೋಲರ್ ಮುಂದಿನ "೧೦೯೪ ಬಸ್ ನಂ................"  ಟ್ರಿಪ್ ಅಂತ ಒದರಿಯೇ ಬಿಟ್ಟ ................
ಕಣ್ಣ ಚಿಂನಲ್ಲಿದ್ದ ನೀರು....ತುಂಬಿದಂತೆಯೇ 
ಡ್ರೈವರ್ ಗೆ ಕೇಳಿದಾಗ ಬಸ್ ಹತ್ತಿಕೊಳ್ಳಿ........ನಾನು ನೋಡಿ ಕೊಳ್ಳುತ್ತಿನಿ ....
ಮುಳುಗುತ್ತಿದ್ದವನಿಗೆ ಹುಲ್ಲು ಕಡ್ಡಿ ಸಿಕ್ಕಂತಾಯಿತು .....
ಕಾಲಿಡಕ್ಕೆ  ಜಾಗ  ಅಂತು ಸಿಕ್ಕಿತು ....
ಜೋರು ಜೋರು ಮಾತು ನಡಿತಿತ್ತು .........ಮಳೆಯ ಅಬ್ಬರ ದಲ್ಲಿ  ....ಕೇಳಲಿಲ್ಲ 
ಕೊನೆಗೂ ನಮ್ಮನ್ನ ನಮ್ಮೂರಿಗೆ ಬಿಟ್ಟು ಮುಂದಿನ ಟ್ರಿಪ್ ಹೋಗಿದ್ದರು .............

ಇಂತಹ ಹಲವಾರು ಮರೆಯಲಾಗದ ಅನುಭವ ವನ್ನ ಐದೂಕಾಲರ ಬಸ್ ನೀಡಿದೆ ....
ಅಂತಹ ಹೊಸದಲ್ಲದ ,ದೂಳಿ ನಿಂದ ಯಾವತ್ತು ಮುಚ್ಚಿರುತ್ತಿದ್ದ ,
ನನ್ನ ಸ್ನೇಹಿತರ ಬಾಯಿಗೆ ಆಗೀಗ ಆಹಾರ ವಾದ,
 " ಇವತ್ತು ಬರೋವಾಗ ಆರೂ ವೀಲ್ ಇತ್ತು ತಾನೆ ?" ಕಿಚಾಯಿಸಿದಾಗ
ಮನದ ಮೂಲೆಯಲ್ಲಿ  ನೋವಾಗ್ತಿತ್ತು.......
ನನ್ನ ಕಾಲೇಜು ಬದುಕಿನ  ಬಾಗವೇ ಆಗಿದ್ದ ೧೦೯೪ ಬಸ್ ನ್ನ ಇವತ್ತಿಗೂ ಮಿಸ್ ಮಾಡ್ತೀನಿ ....
ಬಸ್-ಸ್ಟಾಪ್  ನಲ್ಲಿ ನಿಂತಾಗೆಲ್ಲ  .....  ೧೦೯೪  ಬರುತ್ತಾ ಕಾಯ್ತೀನಿ .........

Wednesday, 2 May 2012

ನಾಟ್ ರಿಚೆಬಲ್


ಮೊನ್ನೆ ನಾನು ಹೊರಡುವಾಗ ಅಮ್ಮ ಚೀಟಿ ಕೊಟ್ಟು ಪುರೋಸತ್ತದಾಗ ನೋಡು ಅಂದಿದ್ದಳು ,
ಎಂದು ಏಕೋ ನೆನಪಾಗಿ ಬ್ಯಾಗ್ ಎಲ್ಲ  ಹುಡುಕಿದೆಅದರಲ್ಲೊಂದು ಫೋನ್  ನಂಬರ್ ,........?
ತಲೆ ತುಂಬಾ  ಬರೆ ಪ್ರಶ್ನೆ ಯಾರದ್ದಿರಬಹುದು ....
ಅಮ್ಮ ಕೊಟ್ಟಿದ್ದೇಕೆ ......?
ವಿಷಯ ನೇರ ಹೇಳುವ ಅಮ್ಮ ಯಾಕೆ ಹೀಗೆ ಮಾಡಿದಳು .....
ಗೊಂದಲದ ಗೂಡಾಗಿ ಅಮ್ಮನಿಗೆ ಫೋನ್ ನಾಯಿಸಿದೆ..
"ಯಾರದ್ದೇ ಅದು ನಂಬರ್ ... ಎಂತದು ಹೇಳದ್ದೆ ಕೊಟ್ಟರೆ  ..  ನಾನೆಂದುಕೊಳ್ಳಲಿ ..
ಹೆಸರಿಲ್ಲ ವಿಷಯ ಏನು ಗೊತ್ತಿಲ್ಲ  ... 
ಅಮ್ಮ ನಿಮ್ಮ ನಂಬರ್ ಕೊಟ್ಟರು ಅಂತ  ಕಾಲ್ ಮಾಡಿದರೆ  ಏನಂದು ಕೊಂಡಾರು.. "
ನನ್ನ ಗೊಂದಲವನ್ನೆಲ್ಲ  ಸೇರಿಸಿ ಅಮ್ಮನಿಗೆ ವರ್ಗಾಯಿಸಿದೆ ..
ಸಿಟ್ಟು ನೆತ್ತಿಗೆರಿರ ಬೇಕು "ಬರುವ ಹೊತ್ತಿಗೆ  ಸುರಬಾಣಕ್ಕೆ
 ಬೆಂಕಿ ಇಟ್ಟುಕಂಡು ಬಂದರೆನಾನು ಎಂತ ಹೇಳಲಾಗ್ತು ..  
ನಿಂಗಕ್ಕೆಲ್ಲ ಎಲ್ಲಿ ಪುರಶತ್ತು ......." ದಬಾಯಿಸಿದರು .... ಕೇಳಿಸಿ ಕೊಂಡೆ..
ಸುಮ್ಮನೆ........  ಮಾತು ಬರಲೇ ಇಲ್ಲ.... ಅಮ್ಮ ಹೇಳಿದ್ದರಲ್ಲಿ ಸುಳ್ಳಿರಲಿಲ್ಲ...
ಓಡುವ ಕಾಲನ ವೇಗಕ್ಕೆ ಹೊಂದಿಕೊಳ್ಳುವ...
ಪ್ರಯತ್ನದಲ್ಲಿ  ಎಲ್ಲೋ ಕಳೆದು ಹೋಗುತ್ತಿದ್ದಿನ..?
ಯಾಕೆ ನನ್ನವರಿಗೆ  ಸಮಯ ಕೊಡಲು ಆಗುತ್ತಿಲ್ಲ ...?
ಬರೇ ವಾರದ ಕೊನೆಯ ದಿನಗಳು  ಕುಟುಂಬಕ್ಕೆ ... 
ಅಂದು ಕೊಂಡರು  ಸಾದ್ಯ ವಾಗುತ್ತಿಲ್ಲ ..
ಯಾವುದೊ ಕೆಲಸ ಉಳಿದಿರುವದು ...
ನಿನ್ನೆ ಮಾಡಲಾರ ದ್ದಕ್ಕೆ ಇಂದು.. 
ಮುಗಿಯದ ಕೆಲಸ ಹಚ್ಚಿಕೊಂಡು....
ದ್ವೀಪವಾಗುತ್ತಿದ್ದಿವ..?  ನನ್ನವರು  ಹೋಗಿ ನಾನು ... ಆದದ್ದಕ್ಕೆ.... 
ಎಲ್ಲೋ ನನ್ನೊಳಗೆ ನಾನೆ ಕಳೆದು ಹೋಗಿದ್ದಕ್ಕೆ ..
ಕ್ಷಣ ಬೇಸರ ಕಾಡಿ... ಮತ್ತೆ ಕೆಲಸದಲ್ಲಿ  ಕಳೆದು ಹೋಗುವ ನನ್ನನ್ತಹ ಎಡಬಿಡಂಗಿ ಗಳಿಗೆ ಸರಿಯಾಗೆ ಹೇಳಿದ್ದರು ಅಮ್ಮ ....
ನಂಬರ್ ಅದೇ ನಿನ್ನ  ಜೊತೆಗೆ ಶಾಲೆಗೆ  ಬರುತ್ತಿದ್ದ 'ಅನುದು ...
ಅವತ್ತು ಪೇಟೆಗೆ ಹೋದಾಗ ಬಟ್ಟೆ ಅಂಗಡಿಯಲ್ಲಿ  ಸಿಕ್ಕಿದ್ದ"
ನಿನ್ನ ಹತ್ತಿರ ಮಾತಾಡ ಬೇಕು ಅಂತೆಲ್ಲ ಹೇಳಿದ್ದ ....
ನಿನ್ನ ನಂಬರ್ ನೆನಪಾಗದ್ದೆ.... 
ಅವಳದ್ದೇ ತಗಂಡು ಬಂದಿ  ಮಾಡಲ್ಲೆ  ಹೇಳ್ತಿ ಹೇಳಿದ್ದಿ.... ಮರ್ತಿಕಡಾ...... ಅಲ್ಲಿ ..
ಸುಬ್ಬ ಬಂದು ನಿಂತಿದ್ದ ಮಜ್ಜಿಗೆ  ತೋಟಕ್ಕೆ ತಗಂಡು ಹೋಗವಡಾ... 
ಮಾತಾಡ್ತಿದ್ರೆ  ಹೊತ್ತು ಹೋಗಿದ್ದೆ ಗೊತ್ತಾಗ್ತಿಲ್ಲೆ " 
ಟಾಟಾ ....
ಅಮ್ಮ ಕೊಟ್ಟ ನಂಬರ್ ತಿರುವಿದೆ .... 
ಅತ್ತ ಲಿಂದ  ಅದೇ ದ್ವನಿ  ಕೆಳ್ದ್ದೆ ಸುಮಾರು ವರ್ಷ ಕಳೆದಿತ್ತು ... ಬದಲಾಗಿರಲಿಲ್ಲ ...
ಅನು ನಾನೆ .... ಮಾತಿನಲ್ಲಿ ಸಮಯ ಹೋದದ್ದೇ ಗೊತ್ತಾಗಲಿಲ್ಲ ... ಮಕ್ಕಳು ಅವರ ಶಾಲೆ .... ಸಂಕಷ್ಟಿ ..... ಅಡಿಕೆ ಕೊಳೆ ....ಬಿ-ಪಿಶುಗರು  .... 
ಎಲ್ಲ ಮಾತಾದ ಮೇಲೆಮೊಬೈಲ್ ಹೊಸದು ಕೊಡಿಸಿದರು ... ನನಗೀಗ  ಚೂಡಿದಾರ್  ಹಾಕಲ್ಲೆ ಅಡ್ಡಿಲ್ಲೆ ಹೇಳಿದ್ದ ...
ನಂಗಂತೂ ಆಕಾಶಕ್ಕೆ ಮೂರೇ ಗೇಣು ...... ಅಂತೆಲ್ಲ ಅವಳು ಮಾತಾಡುತ್ತಿದ್ದರೆ .....ನಾನೆಲ್ಲೋ  ಕಳೆದು ಹೋದ ಭಾವ ....
ವಿಶ್ ಮಾಡಿದೆ ಅವಳ ಖುಷಿಯಲ್ಲಿ ನಾನು ಬಾಗಿಯಾದೆ .....!

ಸಾಕು ಇನ್ನೊಂದು  ದಿನ ಮಾತಾಡಕ್ಕೆ  ವಿಷಯ ಇರ್ಲಿ...ಇವತ್ತಿಗೆ ಸಾಕು ಅಂತ ಅವಳೇ ಕಟ್ ಮಾಡಿದಳು ....
ನಾನು ಸುಮಾರು ವರ್ಷ ಹಿಂದಕ್ಕೆಓಡಿದೆ...........
ಗುಬ್ಬಿ ಎಂಜಲು ಮಾಡಿ ತಿನ್ನುತ್ತಿದ್ದ ಭಟ್ರ ಮನೆಯ ಪೇರಳೆ ಹಣ್ಣು ....ರಜದಲ್ಲಿ ಇಜಾಡುತ್ತಿದ್ದ ಹೊಳೆ ಕಟ್ಟು ...
ಹೊಳೆ ಸಂಕದ ಮೇಲೆ ಕುಳಿತು ...ತಿಂದ ಪಕ್ಕದ ಮನೆಯ ಸವತೆ ಕಾಯಿ .... ಗಜಲಿಂಬೆ ಹಣ್ಣು ...
 ಮೆತ್ತಿಗೆ ಕುಳಿತು ಓದುತ್ತಿದ್ದ ಚಂದಮಾಮ,ಕಾಣುತ್ತಿದ್ದ ಕನಸುಗಳು...
ಶಾರುಕ್ಅಮೀರ್ ಖಾನ್ ಗಳಂತೆ  ಇರುವ ಹುಡುಗ ನನ್ನ ಮದುವೆ ಮಾಡಿ ಕೊಳ್ಳುತ್ತಿನಿ...
ಚೂಡಿದಾರ್ ಹಾಕುತ್ತೀನಿ ... 
ದಿನಾಲೂ ಸೀರೆ  ಬೇಜಾರಪ್ಪ..
(ನಮ್ಮ ಅಪ್ಪಂದಿರು ಅವತ್ತಿನ ಕಾಲಕ್ಕೆ ಚೂಡಿದಾರ್ ಹಾಕಕ್ಕೆ ಬಿಡುತ್ತಿರಲಿಲ್ಲ )
ಅಂತೆಲ್ಲ ಮಾತಾಡಿ ... ನಮ್ಮಲ್ಲಿ ಇಲ್ಲದ ಚೂಡಿದಾರ್ ಕನಸನ್ನ ನನಸಾಗಿಸಲು ....
 ಅಕ್ಕನ ಚೂಡಿದಾರ್ ಕಡ ತಗೊಂಡು ಹಾಕಿಕೊಂಡು .... ಹೋಗಿದ್ದು ಇನ್ನು ನೆನಪಿದೆ ( ಇಂದೂ ನನ್ನ ವಾರ್ಡ್ರೋಬ್ ತೆಗದಾಗಲೆಲ್ಲ ಅಣಕಿಸುವ ಮತ್ತೆಂದು ಅಕ್ಕ ಹಾಕದ "ನನಗೆ ಬೇಡ ಅದು" ಅಂದ ನೆನಪು ಮಾಸಲೇ ಇಲ್ಲ ...  ಹೀಗೆ ಅಂತ ಗೊತ್ತಿದ್ದರೆ ಅದೇ ಪಿಂಕ್ ತರುತ್ತಿದ್ದೆ ಅಂತ ಮಾತಾಡಿ  ಕೊಂಡರೂ  ಇವತ್ತಿಗೂ   ನೋವು ಎದೆಯಾಳದಲ್ಲಿಎಲ್ಲೋ ಕುಳಿತಿದೆ ) 
ಪಿ ಯು ಸಿ  ವರೆಗೆ ಜೊತೆಯಾದ ಅನು... ನಾನು ಡಿಗ್ರೀ  ಸೇರುವ ಹೊತ್ತಿಗೆ  ಹಸೆಮಣೆ  ಏರಿದ್ದಳು
ಅಮ್ಮ ನ  ಸೀರೆಯನ್ನ ಮೊದಲ ಬಾರಿಗೆ ಉಟ್ಟು ಹೋಗಿದ್ದೆ ....
ನಾನು.. 
  ಇಬ್ಬರು  ಮಕ್ಕಳು, ಆಮೇಲೆ ನಾವು ಸಿಕ್ಕಿದ್ದೇ ಅಪರೂಪ ... ಸಿಕ್ಕಾಗೆಲ್ಲೋ...
ತರಾತುರಿಯಿಂದ "ಬಾರೇ ನಮ್ಮನಿಗೆ"  ಸೆರಗು ಸೊಂಟಕ್ಕೆ ಸಿಕ್ಕಿಸಿ ಒಬ್ಬ ಮಗಳನ್ನ ಪೆಟ್ರೋಲ್  ಟ್ಯಾಂಕ್  ಮೇಲೆ ಕೂರಿಸಿ,
 ಇನ್ನೊಬ್ಬಳನ್ನ  ಮಡಿಲಲ್ಲಿ ಕೂರಿಸಿ ಕೊಂಡು ಹೊರಟು ಬಿಡುತ್ತಿದ್ದಾಗ ಮಾತು ತುಂಬಾನೇ ಇತ್ತು...... 
ಮತ್ತೆ ಅದೇ ದಿನಗಳು ಬರ ಬಾರದೇ.......  
ಓದು ಮುಗಿದು  ಎರಡು ವರ್ಷ ಕೆಲಸ ಮಾಡಿ ನಾನು ಮದುವೆ ಯಾಗುವ ಹೊತ್ತಿಗೆ ....
ಮಣ-ಬಾರದ ಸೀರೆ ಉಟ್ಟು ... ಗಂಡ -ಮಕ್ಕಳೊಂದಿಗೆ  ಬಂದದ್ದು.... 
ಆಮೇಲೆ ಅವಳ ಬೇಟಿಯಿಲ್ಲ.. ಹೋದಾಗೆಲ್ಲ ಅಮ್ಮನನ್ನ  ಕೆಳುತ್ತಿನಿ ... ಅಮ್ಮ ಅನು ಹೇಗಿದ್ದಾಳೆ ಸಿಕ್ಕಿದ್ದಳ ?
ಇದು  ಬರೇ ಪ್ರಶ್ನೆ ಯಾಗಿಯೇ  ಉಳಿಯ ತೊಡಗಿದಾಗ .... ಸುಮ್ಮನಾಗಿದ್ದೆ ..... 
ದೂರದೂರಲ್ಲಿ ನಮ್ಮ  ಕೆಲಸ ಗಳಲ್ಲಿ  ಕಳೆದು ಹೋಗುತ್ತಿದ್ದಾಗ ... ಮಿಂಚಿ ಮರೆಯಾಗುವ  ನೆನಪುಗಳು....
  ಪುಟ್ಟ ಪುಟ್ಟ ಸಂತೋಷಗಳಿಗೆ  ತೆರೆದು ಕೊಳ್ಳುತ್ತಿರುವ 'ಅನು' ನನ್ನೆದುರು  ಎತ್ತರಕ್ಕೆ ಬೆಳೆಯುತ್ತಿದ್ದಾಳೆ ....

ನಾನು ಕಾಲನ  ಬೆನ್ನಟ್ಟಿ ಕಳೆದು ಕೊಂಡ... 
ಪುಟ್ಟ ಪುಟ್ಟ ಸಂತೋಷ ಗಳನ್ನ ಮತ್ತೆ ಹೆಕ್ಕಲು ತಯಾರಾಗುತ್ತೇನೆ...
ಯಾಕೆ ಬೇಕಿತ್ತು ಹೆಸರು ... ಕೆಲಸ... ದಿನವಿಡೀ ಮನೆಯಲ್ಲಿದ್ದು ಅಪರಿಚಿತರಂತೆ ... ಲ್ಯಾಪ್ಟಾಪ್ ನಲ್ಲಿ ಕಳೆದು ಹೋಗುವ ನಾವು .... ಕಳೆದು ಕೊಂಡದ್ದೆಲ್ಲಿ.... ನಮ್ಮ ಖುಷಿಯನ್ನ ... 
ಮಾರಿಕೊಂಡ  ಸ್ವಾಭಿಮಾನವನ್ನ ದಿನವಿಡೀ  ಹುಡುಕುವಲ್ಲಿ..........
ಫೋನ್ ನಾಯಿಸುತ್ತೇನೆ..... ನಾಟ್ ರಿಚೆಬಲ್ ........ 

Thursday, 12 April 2012

ಮಹಲುನಮ್ಮ ಪ್ರೀತಿ  ಕೇವಲ 
ನಮ್ಮೊಳಗಿದ್ದ  ಭಾವನೆ 
ತೋರಿಸ ಬೇಕಿರಲಿಲ್ಲ  ಜಗತ್ತಿಗೆ 
ಅದಕ್ಕೆ 
ಕಟ್ಟಿಸಲಿಲ್ಲ ದರ್ಪ ಸಂಪತ್ತಿನ  ಮಹಾಮನೆ....

ನಿನ್ನೋಳಗಿದ್ದ ಪ್ರೀತಿ ನನ್ನೆಡೆಗಿತ್ತು...
ಅದರಂತೆ  ನಿನ್ನೆಡೆಗೆ ನನ್ನದು 
ಆಗ ಬೇಕಿರಲಿಲ್ಲ ರೋಮಿಯೋ -ಜ್ಯೂಲಿಯೆಟ್
ಪಾರೂ-ದೇವದಾಸ್ ,ಷಹಜಹಾನ್ -ಮಮ್ತಾಜ್....

ಬೇಕಿರಲಿಲ್ಲ ದುರಂತ ನಾಯಕನಾಗುವದು
ಅಮರ ಪ್ರೇಮಿಯಾಗುವದು.....
ಸಾಮಾನ್ಯನಾಗಿದ್ದರೆ ಸಾಕು 
ನಮ್ಮದೇ ಲೋಕದಲ್ಲಿ  ನೆಮ್ಮದಿಯಾಗಿರಲು.

ಸಾರಬೇಕಿರಲಿಲ್ಲ ಜಗತ್ತಿಗೆ 
ಪ್ರೀತಿಯೊಂದೇ ಸಾಕಿತ್ತು ಬದುಕಿಗೆ 
ಉಳಿಯ ಬೇಕಿರಲಿಲ್ಲ ಇತಿಹಾಸವಾಗಿ 
ಚರಿತ್ರೆ ತಿರುಚಿದ  ಅಪಹಾಸ್ಯವಾಗಿ......

ಹೇಳು,  ನಾ ಮಾಡಿದ್ದರಲ್ಲೇನಾದರೂ ತಪ್ಪು ?
ಮಣ್ಣಿನಲ್ಲಿ ಮಣ್ಣಾಗುವ ದೇಹಕ್ಕೆ  ಕ್ಷಣ....
ಕ್ಷಣಕ್ಕೆಲ್ಲ  ಬರುವ ನೆನಪಿನ ನೋವಿಗೆ 
ಕಟ್ಟಿಸ ಬೇಕಿ ತ್ತೇ ಮಹಲು ............ 

Wednesday, 28 March 2012

ಬೇಗ ಬಾಮತ್ತದೇ ನೆನಪು ಗೆಳತಿ 
ಮುತ್ತುದುರಿಸಿದಂತ  ಮಾತು 
ಬೆಳದಿಂಗಳಂತೆ ಹೊಳೆವ ನಗು
ನಾವ್ ಜೊತೆಗಿದ್ದ ದಿನಗಳೇ  ನಾಲ್ಕು 
ಆಡಿದ ಮಾತು ನಕ್ಕ ನಗು  
ನಾಲ್ಕು ದಶಕ ಗಳಿಗೆ  ಆಗುವಸ್ಟು

ನಂಬಲಾಗುತ್ತಿಲ್ಲ ......
ಮತ್ತೆ ಮರೆತು ಹೋದಂತ  ಮೌನ 
ತುಟಿ ಬಿರಿದು ದಶಕ ಕಳೆಯಿತೇನೂ
ಬೇಟಿ ಬೇಸರವಾಯಿತ ?
ಸಾಗಿದ ದಾರಿಗಳ ಮದ್ಯೆ ಗೆರೆ 
ಕಂದರ ವಾಯಿತಾ ?

ಹೇಳು ಮನ ಬಿಚ್ಚಿ .....
ಮೌನ ಸಹಿಸಲಾರೆ ಮಾತಾಡು 
ನಗುವಿಗೊಂದು  ಗಡುವ ಕೊಡು 
ಅತ್ತು ಬಿಡುವೆ ...
ಮತ್ತೆ ಬದುಕ ಬೀಜ ಬಿತ್ತಿ 
ನಗುವ ಬೆಳೆ ತೆಗೆಯುವ ....

ಬೇಗ ಜಿಗಿದು ಬಾ  ...
ಬಂಧನವನೇ  ಹರಿದು 
ಕಳೆದು ಹೋದ ಬದುಕ, 
ನರಕವಾದ ನೆನಪ ಬಿಟ್ಟು ...
ಮೊದಲಿನಿಂದ ನಡೆಯುವ ........

Thursday, 23 February 2012

ವಾಸ್ತವ


ಖುಷಿಯಿದ್ದ  ಬದುಕಲ್ಲಿ ತುಳುಕುತ್ತಿತ್ತು ನಗು 
ಮಾಸುತ್ತಿರಲಿಲ್ಲ  ನಗೆ ಮುಗುಳು 
ಹುಣ್ಣಿಮೆಯ ಚಂದ್ರನಂತೆ ,
ಕ್ಷಣ ಬಿಡದ ಸೋನೆ  ಮಳೆಯಂತೆ ....

ಇವೆಲ್ಲ ಎಲ್ಲಿ ಹೋದವು 
ನನ್ನ ಬದುಕಿನ  ಮೂಲೆ ಮೂಲೆ  ಹುಡುಕಿದೆ 
ನಿನ್ನ  ಬಾಳ   ದೀಪ ನನ್ನ ಬದುಕಿನ ಬೆಂಕಿ 
ಯಾಗಬಹುದೆಂದು ನಾನೆಣಿಸಿರಲಿಲ್ಲ

ಅಂದು ನನ್ನರಮನೆಯ ಕಿಟಕಿಯಲಿ ಬಂದು 
ಕನಸಿಗೆ ಬಣ್ಣ ಹಾಕಿದ ಚಂದ್ರಮ 
ಇಂದೂ ಅದೇ ಕಿಟಕಿಯಲಿ  ನಿಂತು 
'ಬ್ಲಾಕ್ ಅಂಡ್  ವೈಟ್ ' ಬದುಕಿನ 
ಸತ್ಯ ಹೇಳುತ್ತಾನೆ ...

ಕಲಕಿ ಹೋದ ಮನಸ್ಸಿಗೆ  ಸೋನೆಮಳೆ
ತಂಪೆರೆಯುವ ಪ್ರಯತ್ನ  ಮಾಡುತ್ತಿದೆ 
ಉರಿದು ಹೋದ ನನ್ನಅಂತರಂಗದ 
ನೆನಪಿಗಾಗಿ ತಡಕಾಟ ನಡೆಸಿದೆ 
ನೀನು ಮಾತ್ರ .............

ಕಯಿ ಗೂಡದ  ಕನಸಿಗಾಗಿ  ಕುರುಬುತ್ತ 
ಇದಕ್ಕೆಲ್ಲ ಯಾರನ್ನೋ ಕಾರಣ ಮಾಡಿ
ನರ ಕಾಣದ  ನಾರಾಯಣನಿಗೊಪ್ಪಿಸಿ
ವಾಸ್ತವ  ಮರೆಯುತ್ತಿಯ .....

ನಾನಿಲ್ಲಿ ...
ಬಾಳಿಗೆ ಬೆಳಕಾಗಲು ಹೊತ್ತಿಸಿದ 
ದೀಪದುರಿಯಿಂದ  ದಿನ ದಿನವೂ 
ಕರಗುತ್ತಿದ್ದೇನೆ, ಮೇಣದ ಬತ್ತಿಯಂತೆ ...
ಮತ್ತೆ ನಗುತ್ತಿದ್ದೇನೆ ...... 

Monday, 30 January 2012

ಹೆಜ್ಜೆಹೆಜ್ಜೆಗಳು ಗೆಜ್ಜೆಗಳತ್ತ ...
ನಡೆದ ದಾರಿಯ ತುಂಬಾ ಒಂಟಿತನ,

ಮೌನದಾಚೆ ಬಂದ ಮಾತು ..
ಚಿಗುರಿ ನಿಂತ  ಮೊದಲ ಹಸಿರು ..
ತಿಳಿವ ಮುನ್ನ  ಬಡಿದ ಸಿಡಿಲು ..
ಮುಖ ಗಳೆಷ್ಟು   ಪ್ರೀತಿಗೆ,

ಒಂಟಿ ಪಯಣ  ಗೊತ್ತಿರದ ದಾರಿ ..
ಮಧ್ಯೆ ಕನುಸುಗಳ  ಗರ್ಭಪಾತ ..
ನಡುಗುವ ಚಳಿಯಲ್ಲೂ  ಹರಿದ ಬೆವರು 
ಇದಕ್ಕೆಲ್ಲ  ನನ್ನೂರ ಸೂರ್ಯ ಸಾಕ್ಷಿ,

ಮುಗಿದ ಮಾತು  ಕಣ್ಣೀರ  ಪ್ರವಾಹಕ್ಕೆ ..
ಕೊಚ್ಚಿಹೋದ  ಗುರುತು ..
ಅಶ್ರುವಿನ ಧಾರೆಗೆ  ತುಂಬಿದ  ಅಘನಾಶಿನಿ ..
ನೆನಪಿನ ಬುಟ್ಟಿಗೆ ಹಿಡಿದ ಗೆದ್ದಲು ..

ಗೆಳೆಯಾ ...
ನನ್ನೂರ ಕನಸುಗಳಿಗೆ  ಸಾವಿಲ್ಲ ..
ನನ್ನೆದೆಯ ಕೋಣೆಯಲಿ  ಬಂಧಿಯದು..
 ಹೆಜ್ಜೆಗಳು ಮತ್ತೆ ಕನಸಿನ ಕಡೆಗೆ......

(ಚಿತ್ರ net ನಿಂದ )

Saturday, 14 January 2012

ಇಲ್ಲೇ ಅಲ್ಲವಾ..?

ಕ್ಷಣ  ನಿಂತೇ ನಡೆವಾಗ 


ನಿನ್ನ ನೆನಪಾಯಿತು ,

ಇಲ್ಲೇ ಅಲ್ಲವಾ..?

ಕಣ್ಣು ಕಣ್ಣು  ಕಲೆತದ್ದು,
ಬೆರಳು ನೆಲ ತಿಕ್ಕಿದ್ದು ,

ತುಟಿ ಅಂಚಲ್ಲಿ ನೀ ನಕ್ಕಿದ್ದು,

ಮಾತು ಶುರುವಾದದ್ದು .........

                                 ಮುಗಿದದ್ದು ...........

ಗೆಳೆಯಾ..................

                     ಎಲ್ಲ ಇತಿಹಾಸ  ಈಗ !