Friday 30 August 2013

ಕೊನೆಯೆಂದು............

ಪ್ರೀತಿಯ ಸುಂದ್ರು ..


ತುಂಬಾನೇ ದಿನದಿಂದ....... ಅಲ್ಲಾ ವರ್ಷ ಗಳಿಂದ 

ನಿನ್ನಲ್ಲಿ ಒಂದು ವಿಚಾರ ಹೇಳಲೇ ಬೇಕು ಅಂತ ಕಾಯುತ್ತಿದ್ದೆ .... 

ನೀನು ಎದುರಾದಾಗೆಲ್ಲಾ ನನ್ನ ಮನದಲ್ಲಿ ಹೇಳಲೋ ಬೇಡವೋ ಅಂತಾ .... 

ಗೊಂದಲ ..... 

ನಾವು ನಮ್ಮ ಓದು ಮುಗಿದು..... 

ನಮ್ಮ - ನಮ್ಮದೂ ಅಂತ  ಬದುಕು ಕಟ್ಟಿ ಕೊಂಡ  ಮೇಲೆ... 

ನಾವಾಗಿ ಯಾವತ್ತೂ ಬೇಟಿಯಾಗಿಲ್ಲ .....  ಅಂತ ನನ್ನ ಮನಸ್ಸು ಹೇಳ್ತಿದೆ 

ನಾವು ಬೇಟಿಯಗಿದ್ದು .... 

ನೀನು ಒಬ್ಬಳ ಗಂಡನಾಗಿ , ಮಕ್ಕಳ ಅಪ್ಪನಾಗಿ, ಅಮ್ಮನ ಮಗನಾಗಿ ....

ಒಂದು  MNC  ಯಲ್ಲಿ ಬಾಸ್ ಆಗಿ .....  

ಹಾಗೆ ನಾನು ಒಬ್ಬನ  ಹೆಂಡತಿಯಾಗಿ , ಮಕ್ಕಳ ಅಮ್ಮನಾಗಿ .... 

ಮಗಳು ಸೊಸೆ  ನಾದಿನಿ ಅತ್ತಿಗೆ ಪಾತ್ರ ಗಳ ಸುತ್ತ ಕಳೆದು ಹೋಗಿ, 

ನನ್ನ ಕೆಲಸದ  ಒತ್ತಡದ  ಬಗ್ಗೆ ಹೀಗೆ ಮಾತಾಡಿದ್ದಿವಿ..... 

ಯಾವತ್ತೂ  ಹೇಳ ಬೇಕೆಂದಿದ್ದದ್ದನ್ನ  ಹೇಳಲೇ ಬೇಕು ಅಂತಾ 

ಅಂದು ಕೊಂಡಾಗೆಲ್ಲ..... 

 ಕಳೆದು ಕೊಂಡದ್ದನ್ನ .....  ಮತ್ತೆ ನೆನಪಿಸುವದು ಬೇಡ 

ಅಂತ ಸುಮ್ಮನಾಗುತ್ತಿದ್ದೆ ... 

ಆದ್ರು ನಿನ್ನೆದುರು ಹೇಳಲು .... ಕೊನೆಗೂ ಆಗಲೇ ಇಲ್ಲ ..... 

ನಿನ್ನ ಚಿನ್ನದ ಪದಕದ ಓದಿಗೆ.....  ಪಟ್ಟಣದ  ಕೆಲಸ ಕರೆದು ಮಣೆ  ಹಾಕಿತು .... 

ಅವಕಾಶದ ಬಾಗಿಲು ತೆರೆದು ಕೊಂಡಿತು .... 

ಸಿಕ್ಕ ಅವಕಾಶ ವನ್ನ  ನೀನು ಉಪಯೋಗಿಸಿ ಕೊಂಡೆ .....

ಅದಿಕ್ಕೆ ನೀನು ಎತ್ತರದ ಹುದ್ದೆ ಯಲ್ಲಿದ್ದಿಯ..... 

ಒಳ್ಳೆಯ ಹುಡುಗಿಯ ಜೊತೆ ಮದುವೆಯೂ ಆಯಿತು... 

ನಿನಗೀಗ ಯಾವ ಕೊರತೆಯೂ ಇಲ್ಲ  

ಇದನ್ನೆಲ್ಲ ನೋಡಿ ಎಲ್ಲರೂ ಸಂತೋಷ ಪಟ್ಟಿದ್ದಾರೆ .... 

ಎಲ್ಲಾರಿ ಗಿಂತ ಹೆಚ್ಚು ಸಂಭ್ರಮ ಪಟ್ಟಿದ್ದು ನಿನ್ನ "ಅಣ್ಣ " 

ನಿನಗೆ ಅಪ್ಪ ನ ಕೊರತೆ ಕಾಡದಿರಲಿ ಅಂತಾ ತನ್ನ ಸುಖ ವನ್ನ ಪಕ್ಕಕ್ಕಿಟ್ಟು .. 

ನಿಮ್ಮನ್ನೆಲ್ಲ ಮಕ್ಕ ಳಂತೆ  ಬೆಳೆಸಿದ ಅಣ್ಣ ...... 

ಅಣ್ಣನಲ್ಲಿ ಎಲ್ಲ ಇಲ್ಲ ವನ್ನೇ ಹುಡುಕಿದೆ ಯಾಕೆ ?

ಯಾಕೆ  ಅಮ್ಮ ನಲ್ಲಿ ಗೊಂದಲದ ಬೀಜ ಬಿತ್ತಿದೆ ..... 

ಫೋನ್ ಮಾಡಿದಾಗೆಲ್ಲ " ಅವತ್ತೇ ಹಣ ಕಳಿಸಿದ್ದೇನಲ್ಲ 

ಇನ್ನು ತೋಟದ ಕೆಲಸ ಅಣ್ಣ ಮಾಡಿಸಿಲ್ಲವ "

" ಅಕ್ಕ ಅಣ್ಣ ಮಾಡುತ್ತಿರೋದು ನೋಡು ಏನು ಕೊರತೆ ಮಾಡಿದ್ದೀನಿ ಅಂತ 

ಹೀಗೆ ಮಾಡುತ್ತಾನೆ ಗೊತ್ತಿಲ್ಲ "

ಅಮ್ಮ ಅಕ್ಕಂದಿರೆದುರು ಅಣ್ಣ ನನ್ನ ವಿಲನ್ ಮಾಡಿ ಬಿಟ್ಟೆ...... 

ಒಮ್ಮೆ ಮನೆಗೆ ಬಂದು ೧೫ ದಿನ ಇದ್ದು ಕೆಲಸ ಮಾಡಿಸಿದ್ದರೆ ನಿನಗೆ 

ಗೊತ್ತಾಗುತ್ತಿತ್ತು ....  ಪರಿಸ್ತಿತಿ .. 

ಕೆಲಸ ದವರ ಮನೆಗೆ ದಿನಾಲೂ ಅಲೆಯೋದು ....... 

ಕೊನೆಗೂ ತನಗಾದ ವಯಸ್ಸಿನ ಪರಿವೆಯೇ ಇಲ್ಲದೆ .... 

ಟೈಮ್ ಇಲ್ಲದೆ  ಕೆಲಸ ಮಾಡೋದು ....

ಹೊತ್ತು ಗೊತ್ತಿಲ್ಲದ ಊಟ ...... 

ಬೆನ್ನು ಬಾಗಿದ ಅಮ್ಮ  ನಿನ್ನ ಮಾತು ಕೇಳಿಕೊಂಡು 

ನೀನು ವದರಿದ್ದೆ ಬದ್ದ ಅಂದು ಕೊಂಡು... 

ಒಂಟಿ ಅಣ್ಣನ ಇದ್ದ ಬದ್ದ ನೆಮ್ಮದಿಗೂ ಕಲ್ಲು ಬಿದ್ದು ...... 

ಮೌನಿ  ಆದ......... ತಾನೆ ಬೆಳೆಸಿದ ತಂಗಿ - ತಮ್ಮಂದಿರ  ಮೇಲಿನ  ಮಮತೆ 

.....  ದೂರ ಹೋಯಿತು 

ಆತನ ಬೇಸರ ನಿಮಗೆ ಗೊತ್ತಾಗಲೇ ಇಲ್ಲ .............. 

ನಿನಗೆ ಅಮ್ಮ ಆಸ್ಪತ್ರೆ  ಸೇರಿದಾಗಲು ಅತ್ತ ಹೋಗಲು  

ನಿನ್ನ ಕೆಲಸ ನಿನ್ನ  ಬಿಡಲಿಲ್ಲ ..... 

ವಾರಗಳು ಅಲ್ಲೇ ಕಳೆದು ಮನೆ ಆಸ್ಪತ್ರೆ  ಇದೆಲ್ಲ ಅವನೇ ಮಾಡಿದ 

( ನೀನೆ ಹೇಳಿದಂತೆ ನಿನ್ನ ಹಣದಲ್ಲಿ )

ಅವತ್ತು ಅಣ್ಣ ಮನೆಗೆ  ಹೋಗಿ ವಾಪಸ್ಸಾಗುವ ಮುನ್ನ ಅಮ್ಮ  ಪ್ರಾಣ ಬಿಟ್ಟಿದ್ದಳು ..... 

ಆ ಸಾವಿಗೂ ಅವನನ್ನೇ ಕಾರಣ ಮಾಡಿದ್ದೂ  ಎಷ್ಟು ಸರಿ ?

"ಹುಟ್ಟಿದವನಿಗೆ ಸಾವು ಖಂಡಿತ "

ಇದು ನಿನ್ನೊಬ್ಬನ ಕಥೆ ಅಲ್ಲಾ  ಸುಂದ್ರ ,

ತನ್ನ ತನ ವನ್ನು ಬಿಟ್ಟು ಕುಟುಂಬದ ಏಳಿಗೆಗೆ .....  

ಬದುಕಿದ ಎಲ್ಲ ಅಣ್ಣ ಅಕ್ಕಂದಿರ 

ಇಂದಿನ ಪರಿಸ್ತಿತಿ ..... 

ದಿನವು ಜೊತೆಗಿದ್ದು  ಬೇಕು ಬೇಡ ಗಳನ್ನೆಲ್ಲ ನೋಡಿ ಕೊಂಡವರಿಗಿಂತ 

ದೂರದಲ್ಲಿದ್ದು ಬಣ್ಣದ ಮಾತಾಡಿದ ಮಕ್ಕಳನ್ನೇ ನಂಬುವ..... 

ಅಮ್ಮಂದಿರ ಕಥೆ............ 

ಯಾಕೆ ನಿನಗಿದೆಲ್ಲ ಗೊತ್ತೇ ಆಗಲಿಲ್ಲವ ?

ಹಣ ನಮ್ಮನ್ನ ಕಟ್ಟಿ ಹಾಕುತ್ತಿದೆಯ ...... ಅಥವಾ ಪರಿಸ್ಥಿತಿ ಯಾ ?

ನಿನ್ನ ಕಾರಣ ನನಗೆ ಬೇಕಿಲ್ಲ ..... 

ಒಮ್ಮೆ ಹೋಗಿ ಮಾತಾಡಿಸು ಅದೇ ತೋಟದಲ್ಲಿ ಅಣ್ಣ ನಿನಗೆ ಸಿಗಬಹುದು ..... 

--ಅನು 

Sunday 18 August 2013

ಅಪ್ಪೆಮರನ ಕೊಡ್ಳು ಹಾಗೂ ಉದ್ದ ಲಂಗ


 ಖಾಲಿ  ಕುಳಿತಾಗ  ಬಾಲ್ಯದತ್ತ ಓಡುವ  ಮನಸು ,

ಎಲ್ಲೋ ಕಳೆದು ಹೋದ ಬಾವ ..... 

ಬಾಲ್ಯ ಮರುಕಳಿಸುವಂತಿದ್ದರೆ  ಇವೆಲ್ಲ ಮಾಡಬಾರದು  ಇವನ್ನ ಮಾಡಬೇಕು  

ಅಂತ ಪಟ್ಟಿ ಮಾಡಿ ಬಿಡುತ್ತಿದ್ದೆನೇನೂ 

ಬಾಲ್ಯ  ದತ್ತ ತಿರುಗಿದಾಗೆಲ್ಲ  ನೆನಪಾಗುವದು ...............  

ಉದ್ದ ಲಂಗ, ಅಪ್ಪೆಮರನ ಕೊಡ್ಳು (ಹಳ್ಳ )...... 

ಕೂಡು ಕುಟುಂಬದಲ್ಲಿ ಬೆಳೆದ ನಮಗೆ  

ವರ್ಷಕ್ಕೆ  ಎರಡು ಬಾರಿ  ಬಟ್ಟೆ ಬರುತ್ತಿತ್ತು .. (ಟಾಕಿ )

ಇಗಸ್ಟೇ  ಹೊಲಿಗೆ ಕಲಿಯುತ್ತಿರುವ ಅತ್ತೆಯಂದಿರು   ಎಲ್ಲರಿಗೂ  ಡ್ರೆಸ್  

ಹೊಲಿಯುವ ಜವಾಬ್ದಾರಿ ಹೊತ್ತಿರುತ್ತಿದ್ದರು .... 

ಅವರವರ  ಎತ್ತರಕ್ಕೆ ಅಗಲಕ್ಕೆ ತಕ್ಕಂತೆ  ಹೊಲಿಯುವ  ನಿಯಮವನ್ನ 

ಎಲ್ಲಿಗೋ ತೂರಿ .... 

ಬಟ್ಟೆಯನ್ನ ಅಳತೆ ಮಾಡಿ ಇವರದ್ದು ಇಸ್ಟು ಪಾಲು ಅಂತ ತೆಗೆದಿಟ್ಟು ....  

ಆಮೇಲೆ  ಹೊಲಿಯುವ  ಕೆಲಸ ಶುರು...........   ನನ್ನಂತಹ ಕುಳ್ಳಿಗೆ ಉದ್ದ 

ಲಂಗ , ಎತ್ತರದ  ದೊಡ್ಡಪ್ಪನ ಮಗಳಿಗೆ ಗಿಡ್ಡ ... 

ಇನ್ನೊಂದು ವಿಚಾರ ಏನೆಂದರೆ .... ನಮ್ಮೂರಿನ (ಪೇಟೆಯ ) ಬಟ್ಟೆ ಅಂಗಡಿ 

ಅಲ್ಲಿಂದ ಕೇವಲ ನಮ್ಮದೇ ೬-೮ ಮನೆಯವರು 

ಬಟ್ಟೆ  ತೆಗೆದು ಕೊಳ್ಳುತ್ತಿದ್ದರೆನೋ  ಅನ್ನುವದು  ನನ್ನ ಅನುಮಾನ ......  

ಯಾವತ್ತು ಅಂಗಡಿಯ ಬಾಗಿಲನ್ನ  ಮುಚ್ಚಿ  ಹೋಗ 

ಬಹುದು ಅಂತ ಪ್ರತಿ ಬಾರಿಯೂ ನಾನು ಮತ್ತು ಅನು 

ಮಾತಾಡಿದ್ದು ಸುಳ್ಳಲ್ಲ ....... 

ಅಪ್ಪ -ದೊಡ್ಡಪ್ಪ  ಪೇಟೆಗೆ  ಹೋದಾಗೆಲ್ಲ  

ಮಧ್ಯಾಹ್ನ  ಕಡ್ಲೆ ಭಟ್ರ  ಖಾನಾವಳಿ ಯಲ್ಲಿ ಊಟ ಮಾಡಿ  

ಚಿತ್ರಿಗಿ ಬಟ್ಟರ  ಬಟ್ಟೆ ಅಂಗಡಿ ಯಲ್ಲಿ ನಿದ್ದೆ  ಮಾಡಿಯೇ ಬರುತ್ತಿದ್ದದ್ದು ........  

( ಅಂಗಡಿ ಯಲ್ಲಿ ಇವರನ್ನ  ಕೂಡಿ ಹಾಕಿ ಊಟಕ್ಕೆ ಹೋದ ಭಟ್ಟರು  ೩ ಘಂಟೆಗೆ 

ಬರುವ ಹೊತ್ತಿಗೆ ಒಳ್ಳೆ ನಿದ್ದೆ ಮುಗಿದಿರುತ್ತಿತ್ತು )

ದಿನ ಕಳೆದಂತೆ  ಅತ್ತೆಯ ಮದುವೆಯೂ ಆಯಿತು........  ಮನೆ ಪಾಲೂ ಆಯಿತು ...... 

ಇ ಸಲ ಅಪ್ಪ  ನಮಗೆ ಮೊದಲು ಬಟ್ಟೆ ತಂದಾಗ .... ಎಲ್ಲೋ ಅನುಗೆ ಇನ್ನು 

ಬಂದಿಲ್ಲ ನನಗೆ ಮೊದಲು ಹೊಸ ಲಂಗ 

ಅಂತ ಖುಷಿ ಯಾದರೂ  ಆ ಖುಷಿ  ತುಂಬಾ ದಿನ ಉಳಿಯಲಿಲ್ಲ ..... 

ನಮಗೆ ತಂದು ಎರಡು ವರದ ನಂತರ  ದೊಡ್ಡಪ್ಪ ಬಟ್ಟೆ ತಂದರು  

ಹೊಸ ಡಿಸಾಯನ್ ದು .... 

ಆರು ತಿಂಗಳ ಮೇಲೆ ನಮಗೆ ಅಂತದ್ದೇ ಬಂತು ಅವಾಗ 

ಹಳೆಯದು  ಅನ್ನಿಸಿತ್ತು ..... ಪ್ರತಿ ಬಾರಿಯೂ ಹೀಗೆ 

ಕೊನೆಗೂ ತಿಳಿದ ಕಾರಣ ಏನೆಂದರೆ  ಅಲ್ಲಿ ಬಹುಷಃ ಬಟ್ಟೆ ಖರೀದಿ 

ಮಾಡುತ್ತಿದ್ದದ್ದು .....  ನಮ್ಮೆರಡೇ  ಮನೆ..... 

ಎರಡು ಮನೆಯಿಂದ ಒಂದು ಟಾಖಿ  ಖಾಲಿ ಆಗುತ್ತಿತ್ತು ........... 

ಒಂದು ಖಾಲಿ ಅದ ಮೇಲೆ ಇನ್ನೋದು ತರುವ ಸ್ವಭಾವ ...... ಭಟ್ಟರದ್ದು .... 

ಇಲ್ಲಿ ವ್ಯಾಪಾರ ಇಲ್ಲದೆ ಯಾಕೆ ಇಲ್ಲಿದ್ದಾರೆ ಅಂತಾ  ಕೇಳಿದ್ದಕ್ಕೆ ನಮ್ಮದು 

ಊರಲ್ಲಿ  ದೊಡ್ಡ ಷೋ ರೂಂ  ಇದೆ ಅನ್ನುವ  ಸಿದ್ದ 

ಉತ್ತರ............  

ಕೆಲವೇ ಮನೆಯವರು  ಹೋಗುತ್ತಿದ್ದದ್ದ ರಿಂದ  ಮನೆಯ ಎಲ್ಲ ಹಬ್ಬ ಹರಿ 

ದಿನಕ್ಕೂ  ಅವರನ್ನು ಕರೆಯುವ ಪರಿ ಪಾಟ 

ಒಮ್ಮೆ ಅವರ     ಷೋ ರೂಂ  ನೋಡಿದಾಗಲೇ ಗೊತ್ತಾಗಿದ್ದು  ಅಲ್ಲಿ ಯವರಿಗೆ 

ಕೊಡುತ್ತಿದ್ದದ್ದು  ಇದೆ ಉತ್ತರ............ 

ಇನ್ನೊಂದು  ಹೇಳಲೇ ಬೇಕಾದದ್ದು  ಅಪ್ಪೆ ಮರನ  ಕೊಡ್ಳು ..... 

ಪ್ರತೀ ಮಳೆಗಾಲಕ್ಕೆ ಅಪ್ಪ ಬಣ್ಣದ ಕೊಪ್ಪೆ ತಂದು ಕೊಡುತ್ತಿದ್ದರು 

ಛತ್ರಿ ನಮ್ಮೂರಿನ ಗಾಳಿ  ಮಳೆಗೆ  ಒಂದು ತಿಂಗಳೂ 

ಉಳಿಯುತ್ತಿರಲಿಲ್ಲ ...... 

ಶಾಲೆಯಲ್ಲಿ  ಅಕ್ಕೋರು ಬಿಟ್ಟು (ಟೀಚರ್ )ಎಲ್ಲರಿಗೂ  ಕೊಪ್ಪೆಯೇ ಆಗಿದ್ದರಿಂದ 

ಬೇಜಾರೇನು ಇರಲಿಲ್ಲ ............. 

ಮಳೆ ಗಾಲದಲ್ಲಿ ತುಂಬಿ ಹರಿಯುವ  ಕೊಡ್ಳು  

ಉಳಿದ ದಿನಗಳಲ್ಲಿ ಒರತೆ ನೀರು ಇರುತ್ತಿತ್ತು ..... 

ನನ್ನ ನಾಲ್ಕನೆ ಕ್ಲಾಸ್ ವರೆಗೂ, ಜೋರಾಗಿ ಮಳೆ ಬಂದಾಗ  ನನ್ನ ಸೊಂಟದ 

ವರೆಗೂ ಬರುತ್ತಿದ್ದ ನೀರು ..... 

ನಂತರ ಒಮ್ಮೆಯೂ ಅಸ್ಟೊಂದು ಬರಲಿಲ್ಲಾ ಯಾಕೇ ಅಂತಾ .... 

ಗೊತ್ತೇ ಆಗಲಿಲ್ಲ 

ದಿನವೂ ಬರೆಯುತ್ತಿದ್ದ ಒಳ್ಳೇ ಕೆಲಸದ ಪಟ್ಟಿಯಲ್ಲಿ ..... 

ವಾರಕ್ಕೆ ಒಮ್ಮೆಯಾದರೂ ... 

" ನಾನು ಕುರುಡನನ್ನು ರಸ್ತೆ ದಾಟಿಸಿದೆನು " ಅಂತ ಬರೆಯುತ್ತಿದ್ದೆ ,ಅಸಲು 

ನಮ್ಮೂರಿನಲ್ಲಿ ಯಾರೋಬ್ಬರು 

ಕುರುಡರು  ಇರಲಿಲ್ಲ ......  

ಕೇವಲ ೧೪ ಮನೆಗಳಿದ್ದ ನಮ್ಮ ಊರಿನಲ್ಲೇ ಉಳಿದು ,

ಊರವರೆ  ಆಗಿದ್ದ  ಅಕ್ಕೋರು 

ಗೊತ್ತಿದ್ದೂ ಗೊತ್ತಿದ್ದೂ ರೈಟ್ ಹಾಕಿ ಸಹಿ ಮಾಡುತ್ತಿದ್ದದ್ದು  

ಯಾಕೆ ?  ಹೀಗೆ  ಇನ್ನೂ  ಅರ್ಥವೇ  ಆಗದ , 

ಆಗೀಗ  ಕಾಡುವ ......  ವಿಚಾರ ಗಳು ಇನ್ನು ಇವೆ