ಖುಷಿಯಿದ್ದ ಬದುಕಲ್ಲಿ ತುಳುಕುತ್ತಿತ್ತು ನಗು
ಮಾಸುತ್ತಿರಲಿಲ್ಲ ನಗೆ ಮುಗುಳು
ಹುಣ್ಣಿಮೆಯ ಚಂದ್ರನಂತೆ ,
ಕ್ಷಣ ಬಿಡದ ಸೋನೆ ಮಳೆಯಂತೆ ....
ಇವೆಲ್ಲ ಎಲ್ಲಿ ಹೋದವು
ನನ್ನ ಬದುಕಿನ ಮೂಲೆ ಮೂಲೆ ಹುಡುಕಿದೆ
ನಿನ್ನ
ಬಾಳ ದೀಪ ನನ್ನ ಬದುಕಿನ ಬೆಂಕಿ
ಯಾಗಬಹುದೆಂದು ನಾನೆಣಿಸಿರಲಿಲ್ಲ
ಅಂದು ನನ್ನರಮನೆಯ ಕಿಟಕಿಯಲಿ ಬಂದು
ಕನಸಿಗೆ ಬಣ್ಣ ಹಾಕಿದ ಚಂದ್ರಮ
ಇಂದೂ ಅದೇ ಕಿಟಕಿಯಲಿ ನಿಂತು
'ಬ್ಲಾಕ್ ಅಂಡ್ ವೈಟ್ ' ಬದುಕಿನ
ಸತ್ಯ ಹೇಳುತ್ತಾನೆ ...
ಕಲಕಿ ಹೋದ ಮನಸ್ಸಿಗೆ ಸೋನೆಮಳೆ
ತಂಪೆರೆಯುವ ಪ್ರಯತ್ನ ಮಾಡುತ್ತಿದೆ
ಉರಿದು ಹೋದ ನನ್ನಅಂತರಂಗದ
ನೆನಪಿಗಾಗಿ ತಡಕಾಟ ನಡೆಸಿದೆ
ನೀನು ಮಾತ್ರ .............
ಕಯಿ ಗೂಡದ ಕನಸಿಗಾಗಿ ಕುರುಬುತ್ತ
ಇದಕ್ಕೆಲ್ಲ ಯಾರನ್ನೋ ಕಾರಣ ಮಾಡಿ
ನರ ಕಾಣದ ನಾರಾಯಣನಿಗೊಪ್ಪಿಸಿ
ವಾಸ್ತವ ಮರೆಯುತ್ತಿಯ .....
ನಾನಿಲ್ಲಿ ...
ಬಾಳಿಗೆ ಬೆಳಕಾಗಲು ಹೊತ್ತಿಸಿದ
ದೀಪದುರಿಯಿಂದ ದಿನ ದಿನವೂ
ಕರಗುತ್ತಿದ್ದೇನೆ, ಮೇಣದ ಬತ್ತಿಯಂತೆ ...
ಮತ್ತೆ ನಗುತ್ತಿದ್ದೇನೆ ......